Sunday, May 17, 2009

ಸೌಂದರ್ಯ ಮತ್ತು ಚಂದ

ಗಡಿಯಲ್ಲಿ ಹೋಗುವುದು ಎಂದರೆ ನಾ ಮುಂದೆ ಎನ್ನುವ ವಯಸ್ಸು. ಅಜ್ಜ ಗಡಿ ಕಟ್ಟುವಾಗಲೇ ಎಡದೆತ್ತು ಯಾವದು, ಬಲದೆತ್ತು ಯಾವುದು ಎಂದು ಕೇಳಿ ಗಾಡಿ ಹೊಡಿಯುವುದರ ಬಗ್ಗೆ ಬಹಳ ಗೊತ್ತಿದೆ ಎಂದು ಹೆಮ್ಮೆ ಪಡುವುದಿತ್ತು. ಎತ್ತಿನ ಮುಗದಾಣ ಹಿಡಿದು ಸ್ವಲ್ಪ ದೂರ ನಡೆಸಿದರೆ ಏನೋ ಸುಖ. ಆದರೆ ಅಂದು ಮಾತ್ರ ಸೋಮಾರಿತನ. ಅವಾಗ ತಾನೆ ಹತ್ತರ ಪರೀಕ್ಷೆ ಮುಗಿದಿತ್ತು. ಕೊಸಗುಟ್ಟುತ್ತಾ ಮನಸಿಲ್ಲದ ಮನಸಿಲ್ಲನಲ್ಲಿ ಅಜ್ಜನ ಜೊತೆ ಹೊರಟಿದ್ದೆ. ಮೇ ತಿಂಗಳ ಉರಿ ಬಿಸಿಲು. ಹಳೆ ಮಳೆಯ ಸುಳಿವಿಲ್ಲ. ಗಾಡಿಯಲ್ಲಿ ಬಿಳಿಹುಲ್ಲು ಹಾಕಿ ಅದರ ಮೇಲೆ ಕಂಬಳಿ ಹಾಕಿತ್ತು.ಅಜ್ಜ ಗಾಡಿ ಬದಿಯ ಅಟ್ಟಣಿಗೆ ಹಿಡಿದು ಕುಳಿತಿದ್ದ. ನಾನು ಗಾಡಿ ಹೊಡೆಯುತ್ತಿದ್ದ ಮಾದನ ಜೊತೆ ಮು೦ದೆ ಕುಳಿತಿದ್ದೆ.ನಾವು ದೊಡ್ಡಳ್ಳಿ ಬಿಟ್ಟು ಅನಂತಪುರದತ್ತ ಹೊರಟಿದ್ದೆವು. ಬೇಸಗೆಯ ಒಣಗಾಳಿ, ದೂಳು ಉರಿಬಿಸಿಲು. ಬೇಸರ. ಯೊಚಿಸಲು ಆಲಸ್ಯ. ಎತ್ತುಗಳು ಒ೦ದೆ ಸಮನೆ ನೆಡೆದಿದ್ದವು. ಎತ್ತಿನ ಗ೦ಟೆ ಮತ್ತು ಗಾಡಿಯ ಕೀಲಿನ ಹೊರತು ಎಲ್ಲಡೆ ಮೌನ. ಆಗಾಗ ಮಾದನ ಹೊಯ್ಯ ಹುಶ್ ಎಂದು ಎತ್ತುಗಳನ್ನು ಹುರಿದಿಂಬಿಸುವುದು ಬಿಟ್ಟರೆ ಪರಿಸರವೆಲ್ಲ ಏಕಾನತೆಯಿಂದ ಕೂಡಿತ್ತು; ಮತ್ತು ನಮ್ಮ ಜೊತೆಯಲೀ ಬರುತಿತ್ತು. ಸೂರ್ಯ ನೆತ್ತಿಗೆರುವ ಹೊತ್ತಿಗೆ, ಗಾಡಿ ಮೂಲೆ ಮನೆ ಮಂಜಣ್ಣನ ಮನೆ ಎದರು ನಿಂತಿತು. ಮಂಜಣ್ಣ ಅಜ್ಜನ ಹಳೆಯ ಗೆಳೆಯ. ಎತ್ತರದ ಆಳು. ಅವನ ಕ ಠಿನ ಮುಖ, ಮೊಂಡು ಮೂಗು , ಪೊದೆ ಹುಬ್ಬು, ಕುರುಚುಲು ಗಡ್ಡ , ಮಾಸಿದ ಸಾಟಿ ಪಂಜೆ, ಮನಸ್ಸಿಗೆ ಸ್ವಲ್ಪ ಕಿರಿಕಿರಿ ಮಾಡಿತ್ತು.ಮಂಜಣ್ಣನ ಮನೆಯಲ್ಲಿ ಗಾಳಿ ದೂಳು ಇಲ್ಲದಿದ್ದರೂ ಇದೂ ರಸ್ತೆಯ ಬಾಗವೇನೂ ಅನಿಸುತ್ತಿತ್ತು. 'ಉರಿ ಬಿಸಿಲು, ಒಂದು ಮಳೆ ಇಲ್ಲ, ಈ ವರ್ಷ ಏನೋ' ಎನ್ನುತ್ತಾ ಮಂಜಣ್ಣ ಅಜ್ಜನ ಸ್ವಾಗತ ಮಾಡಿದ. ಮನೆಯಲ್ಲಿ ಎಲ್ಲ ಹೆಂಗಿದ್ದಾರೆ ಎಂಬ ಕುಶಲೋಪಚರವೂ ಆಯಿತು. ಅಜ್ಜ ' ಅಬ್ಬಬ್ಬ ಏನು ಬಿಸಿಲು, ಮೊದಲು ಸ್ವಲ್ಪ ನೀರು ಕೊಡು ಮಹರಾಯ' ಹ೦, ' ಕಮಲೀ, ಏ ಕಮಲಿ ಸ್ವಲ್ಪ ನೀರು ' ಒಳಗಡೆ ಮಾತು ಕೇಳಿಸಿತು, ಬಹುಷಹ ಮೊಮ್ಮಗಳಿರಬೇಕು . ಒಳಗಡೆಯಿಂದ ೧೬ - ೧೭ ವರ್ಷದ ಹುಡುಗಿ ಬಂದಳು. ಕೆಂಪು ಕುಬುಸ, ನೀಲಿ ಲಂಗ ತೊಟ್ಟಿದ್ದಳು. ಅಜ್ಜ ಅಡಿಗೆಮನೆಗೆ ಎದುರಾಗಿ ಮಣೆ ಮೇಲೆ ಕುಳಿತಿದ್ದ . ನಾನು ಅವನ ಎದುರಲ್ಲಿ ಅಕ್ಕಿ ಚೀಲದ ಮೇಲೆ ಕುಳಿತಿದ್ದೆ. ಅವಳು ನನ್ನ ಹಿಂದಿನಿಂದ ಬಂದು ಅಜ್ಜನ ಎದುರು ಲೋಟ, ಸಣ್ಣ ಬಾಳೆ ಎಲೆಯಲ್ಲಿ ಬೆಲ್ಲ ಇಟ್ಟಳು. ನಿದಾನವಾಗಿ ನೀರು ಹನಿಸಿದಳು. ನನ್ನ ಹಿಂದಿನ ಕಿಟಕಿಯಿಂದ ಅವಳ ಬೆನ್ನ ಮೇಲೆ ಬೆಳಕು ಬೀಳುತ್ತಿತ್ತು. ಸ್ವಲ್ಪ ಉದ್ದವೇ ಎನ್ನುವ ಜಡೆ, ದುಂಡಾದ ಹಿಮ್ಮಡಿ, ನೀರೆರೆಯುತ್ತಿರುವ ಕೈ , ಕಿಟಕಿಯ ಬೆಳಕಿಂದ ಹೊಳೆಯುತ್ತಿರುವ ಕೆನ್ನೆಯ ಒಂದು ಪಾರ್ಶ್ವ ನನ್ನ ಹದಿಹರೆಯದ ಕುತೂಹಲವನ್ನು ಹುರಿಗೊಳಿಸಿತು. ತಾಮ್ರದ ಚೊಂಬು ಲೋಟ ಮತ್ತು ಬೆಲ್ಲದ ಬಾಳೆಯನ್ನು ಕುಶಲವಾಗಿ ಕೈಗೆತ್ತಿಕೊಂಡು ನನ್ನ ಕಡೆ ತಿರುಗಿದಳು. ನಾನೆಲ್ಲಿದ್ದೇನೆಂದು ತಿಳಿಯಲೇನೋ ನನ್ನಡೆಗೆ ಒಂದು ನೋಟ ಹರಿಸಿ ಲೋಟ ಇಟ್ಟು ನೀರು ಹನಿಸಿದಳು. ಅವಳು ಸ್ವಲ್ಪ ಕತ್ತು ಬಗ್ಗಿಸಿ ಮೊಣ್ಕಾಲಮೇಲೆ ಕುಳಿತು ನೀರು ಹನಿಸಿತ್ತಿದ್ದಳು.ನನ್ನ ಮೈಮನ, ಹೃದಯದ ಮೇಲೆ ಕಂಪನವೊಂದು ಹಾದು ಹೋಯಿತು. ಬೆಳಗಿನ ದೂಳು, ಗಾಳಿ ಏಕನತೆ ಈಗ ಅಲ್ಲಿರಲಿಲ್ಲ. ' ಇನ್ನು ನೀರು ಬೇಕ' ಎಂಬ ಮಾತು ಸುರುಳಿಸುರುಳಿಯಾಗಿ ತೇಲಿ ಬಂತು. ಮೂಕನಂತೆ ತಲೆ ಆಡಿಸಿದೆ. ಕಮಲ ಅಥವಾ ಅವಳ ಅಜ್ಜ ಕರೆದಂತೆ ಕಮಲಿ, ಸೌಂದರ್ಯ ಪ್ರತೀಕವಗಿದ್ದಳು. ಇದನ್ನು ನಿಮಗೆ ಹೇಗೆ ಹೇಳಲಿ? ಹೀಗೆ ಹೇಳಬಹುದೇನೋ. ಬೆಳಗಿನ ಸೂರ್ಯ, ಅಲ್ಲಲಿ ಮಂಜು, ಲವಲವಿಕೆಯಿಂದ ಹಾರುವ ಹಕ್ಕಿ, ಗದ್ದೆಗೆ ಹೊರಟಿರುವ ರೈತರು, ಕೆರೆಯ ಮೇಲೆ ಏಳುತ್ತಿರುವ ಹಬೆ , ದೇವರಿಗೆ ಹೂವು ಕುಯುತ್ತಿರುವ ಮಕ್ಕಳು, ಮರದ ಸಂದಿಯಿಂದ ಬರುತ್ತಿರುವ ಬಿಸಿಲ್ಗೋಲು ಹೀಗೆ ಇವೆಲ್ಲರ ಒಟ್ಟು ಚಿತ್ರಣ ಅಪ್ರತಿಮ. ಇವುಗಳಲ್ಲಿ ಒಂದೊಂದು ಚಂದವೋ ಅಥವಾ ಒಟ್ಟು ಚಿತ್ರ ಚಂದವೋ ಹೇಳುವುದು ಕಷ್ಟ!! ಇಲ್ಲಿಯೂ ಹಾಗೆ ಇತ್ತು.ಮಿಂಚಿನ ತರ, ಹಿಡಿಯುವ ಮುನ್ನ, ತಿಳಿಯುವ ಮೊದಲು ಹಾದು ಹೋಗಿತ್ತು. ಕಲೆಗಾರ ನನಗಿಂತ ಚೆನ್ನಾಗಿ ಹೇಳುತ್ತಿದ್ದನೇನೋ. ಈ ಸ್ಫೂರ್ತಿಯ ಮೂರ್ತಿ ಭೂಮಿಯಲ್ಲಿ ಹೇಗೆ ದೇವರಿಗೆ ಗೊತ್ತು. ಇಲ್ಲಿ ಪ್ರಕೃತಿಯು ಎಲ್ಲಿಯೂ ಎಡವಿಲ್ಲ. ಹಣೆ, ಕಣ್ಣು, ಮೂಗು, ತುಟಿ ಅದರ ಮೇಲಿನ ನಗು , ಈ ಮುಖಕ್ಕೆ ತಕ್ಕ ದೇಹ. ಎಲ್ಲವು ಒಂದಕ್ಕೊಂದು ಸೇರಿಕೊಂಡು ಸುಂದರ ಗೆರೆಯನ್ನು ಮೂಡಿಸಿತ್ತು. ಸಂಗೀತ ಗೋಷ್ಠಿಯಾ ಹಲವು ವಾದ್ಯಗಳು ತಾಳ ತಪ್ಪದೆ ನುಡಿಸಿ ಸುಮಧುರ ಗಾನವಾಗುವಂತೆ, ಅವಳೆಲ್ಲ ಅಂಗಾಂಗಗಳು ಬಳ್ಳಿಯಂತೆ ಹೆಣೆದುಕೊಂಡು ಚಂದದ ಗೊಂಬೆಯಂತೆ ನಿಂತಿದ್ದಳು. ನನ್ನ ಕಡೆ ಅವಳ ಗಮನ ಇರಲಿಲ್ಲ. ನಾನು ಶಾಲೆ ಹುಡುಗನೆಂದೋ? ನನಗೆ ಈ ಸೌಂದರ್ಯ ಅಸಹನೀಯ ಭಾವ ಹುಟ್ಟಿಸಿತು. ಒಂದು ತರಹದ ನೋವು. ಈ ಅಂದವನ್ನು ನನ್ನ ಕಿಸೆಯಲ್ಲಿ, ಕಣ್ಣಲ್ಲಿ, ಮನಸಲ್ಲಿ ಹಿಡಿದಿಡಲಾಗದ ಅಸಾಹಯಕ ಭಾವ. ನೋವು. ಈ ಕ್ಷಣ ಕ್ಷಣಿಕವೆಂಬ ಇನ್ನೊಂದು ನೋವು. ಮಾನವನ ಮೂಲಗುಣವದ ಆಸೆ ಒಳಗೆ ಕುಳಿತು ಈ ಮಧುರ ನೋವನ್ನು ಹುಟ್ಟು ಹಾಕುತಿತ್ತು. ಅಜ್ಜನದೇನು ಹುಡುಗಿಯರನ್ನು ನೋಡುವ ವಯಸ್ಸಲ್ಲ. ಆದರಿಲ್ಲಿ ಬೇರೆ ಮಾತು. ಅಜ್ಜ ಕಮಲಿಯನ್ನು ನೋಡುತ್ತಾ 'ಈಕೆ ದ್ಯವನ ಮಗಳೇ?' ಎಂದು ಮಂಜಣ್ಣನ ಕೇಳಿದ. ನಂತರ ಚಂದದ ಸುಳಿಯಲ್ಲಿ ಸಿಕ್ಕಿಕೊಂಡು ಅವರ ಮಾತುಗಳು ಹಾಗೆ ಕಡಿಮೆ ಆದವು. ಈಗಾಗಲೇ ಮಾದ ಎತ್ತುಗಳನ್ನು ಕೆರೆಗೆ ಒಯ್ದು ನೀರು ಕುಡಿಸಿಕೊಂಡು ಬಂದಿದ್ದ. ಎತ್ತುಗಳು ಮೈ ಜುಮ್ಗುಡಿಸಿ ನೀರನ್ನು ಆಚೀಚೆ ಸಿಡಿಸುತ್ತಿದ್ದವು. ಅಜ್ಜ ಹಾಗೆ ಗೋಡೆಗೆ ಒರಗಿ ನಿದ್ದೆ ಮಾಡಿದ. ನಾನು ಹೊರಗೆ ಬಂದು ಕಲ್ಲು ಕಟ್ಟಣೆ ಮೇಲೆ ಕುಳಿತೆ. ಮೆಟ್ಟಿಲಿಳಿದು ಹುಡುಗಿ ಮತ್ತೆ ತೇಲಿ ಬಂದಳು. ಮತ್ತೇನೋ ತೆಗೆದುಕೊಂಡು ಹೋದಳು. ಓ ನನ್ನ ಮುಂದೆ ಸುಳಿಯುತ್ತಿದ್ದಾಳೆ ನಾನು ಅವಳ ಕಡೆ ನೋದಬೇಕೆನ್ದೇನೋ, ನನಗನಿಸಿದ್ದು! ಮಾದನಿಗೆ ಬೆಲ್ಲ ನೀರು ಕೊಟ್ಟಳು. ಎತ್ತಿಗೆ ಬಿಳಿಹುಲ್ಲು ಹಾಕಿದಳು.ಈಗ ಮಾದನ ಮನಸ್ಥಿತಿ ನನಗಿಂತ ಭಿನ್ನವಾಗಿರಲಿಲ್ಲ. ಎತ್ತುಗಳ ಮೇಲಿನ ಅವನ ಅಸಹನೆ ಮಾಯವಾಗಿತ್ತು. ತಿಳಿಯದ ಕಿರುನಗೆಯೊಂದು ಅವನ ಕರಿ ಮುಖದಲ್ಲಿ ಮಿಂಚಿತ್ತು. ನನಗೀಗ ನಿಶ್ಚಯವಾಗಿತ್ತು, ಅವನೂ ಸಹ ನನ್ನಂತೆ ಈ ಸೌಂದರ್ಯ ತರುವ ಸುಖ ಸಂಕಟದಿಂದ ನರಳುತ್ತಿದ್ದ. ನನ್ನನು ಕಾಡುತ್ತಿದ್ದ ಅ ನೋವು ಅವನನ್ನ್ನು ಕಾಡತೊಡಗಿತು. ಅನಂತ ಸೌಂದರ್ಯವನ್ನು ಹಿಡಿದಿಡಲಾಗದ ನೋವು. ಅಥವಾ ತನಗೆ ಸಿಗದಲ್ಲ ಎಂಬ ನೋವು. ಮಾದ ಮತ್ತು ನಾನು ಹೊರಗೆ ಕುಳಿತು ಕಾದೆವು, ಅಲ್ಲಿ ಇಲ್ಲಿ ಹಾರುತ್ತಿದ್ದ ಮಿಂಚನ್ನು ನೋಡಲು. ಮಾದನಿಗೆ ಬೆಲ್ಲ ನೀರು ತಂದಳು. ಎತ್ತಿಗೆ ಬಿಳಿ ಹುಲ್ಲು ಹಾಕ್ತಿದಳು. ಅಜ್ಜ ಎದ್ದು ಬಂದ. ಮದ ಗಡಿ ಕಟ್ಟಿದ. ಕಮಲಿ ಬಂದು ದಣಪೆ ತೆಗೆದಳು. ಮನಸಿಲ್ಲದ ಮನಸಿನಲ್ಲಿ ಮೂವರು ಗಾಡಿಯಲ್ಲಿ ಮೌನವಾಗಿ ಕುಳಿತೆವು. ಮೂವರ ಮನಸಿನಲ್ಲೂ ಏನೂ ಸಿಡುಕು, ಹಾಗಾಗಿ ಮಾತಿರಲಿಲ್ಲ. ಗಡಿಗೇನು ನಮ್ಮ ಸಂಕಟ ತಿಳಿದೀತು! ಈಗ , ಒಂದು ಮಾತಾಡದ ಮಾದ, ಕಾನೂರು ಸೀಮೆರು ಚೆಂದ್ ಇರ್ತಾರ .... ಹೇಳುತ್ತಾ, ಬರಿಕೊಲನ್ನು ಎತ್ತುಗಳ ಬೆನ್ನ ಮೇಲೆ ಆಡಿಸಿದ.
ಭಾಗ ೨
ರೈಲು ಯಾವುದೊ ನಿಲ್ದಾಣದಲ್ಲಿ ನಿಂತಿತ್ತು. ಪ್ರತಿ ನಿಲ್ದಾಣದಲ್ಲೂ ಇಳಿಯುವ ಚಟ ನನಗೆ. ಇಳಿದು ಅಲ್ಲ್ಲಿಂದ ಇಲ್ಲಿಗೆ ಓಡಾಡುತ್ತಿದ್ದೆ. ಇಲ್ಲಿಯೂ ವಡೆ ಮಾರುವರು, ಇಡ್ಲಿ ಮಾರುವರು, ಪೇಪರಿನವರು, ಪ್ರಯಾಣಿಕರು, ಅವರನ್ನು ಕಳಿಸಲು ಬಂದವರು ಹೀಗೆ ಆ ಸಂಜೆ ಆ ನಿಲ್ದಾಣದ ಮತ್ತೊಂದು ಸಂಜೆ ಆಗುವುದರಲ್ಲಿತ್ತು, ಆ ಹುಡುಗಿ ಅಲ್ಲಿರದಿದ್ದರೆ .......... ಒಂದು ಕುಟುಂಬ ಎಲ್ಲಿಗೋ ಹೊರಟಿದೆ, ಈ ಹುಡುಗಿ ಮತ್ತು ಅವಳ ಬಳಗದವರು ಕಳಿಸಲು ಬಂದಿದ್ದಾರೆ. ರೈಲಿಗೆ ಹೋಗುವವರು ರೈಲು ಹತ್ತಿ ಚೀಲ ಪೆಟ್ಟಿಗೆ ಎಲ್ಲ ಹೊಂದಿಸಿಕೊಂಡು ಕಿಟಕಿಯಲ್ಲಿ ಕುಳಿತು ಕಳಿಸಲು ಬಂದವರ ಜೊತೆ ಮಾತಾಡುತ್ತಿದ್ದಾರೆ. ನಾನು ಮೊದಲೇ ಹೇಳಿದಂತೆ ಆಗ ಸಂಜೆ ಆಗಿತ್ತು; ಸೂರ್ಯನ ಸಂಜೆಯ ಹೊಂಗಿರಣ ಅವಳ ಮುಖದ ಮೇಲೆ ಬಿದ್ದಿತ್ತು, ಅವಳ ತಲೆಯ ಗುಂಗುರು ಬೆಳಕಲ್ಲಿ ಹೊಳೆಯುತ್ತಿತ್ತು. ಮುಖದಲ್ಲಿ ಅದೇನೋ ಕಳೆ, ಮುಂಡು ಮುಗು, ತಿದ್ದು ತೀಡಿದ ಹುಬ್ಬೆನಲ್ಲ, ದೇಹ ಸೌಂದರ್ಯವೇನು ಹೇಳುವಅಂತದ್ದಲ್ಲ, ಆದರು ಅಲ್ಲೊಂದು ಅಪೂರ್ವ ಸೌಂದರ್ಯ ಮೂಡಿತ್ತು. ಅದು ಅವಳ ದೇಹದ್ದಲ್ಲ ಆದರೆ ಅವಳ ವ್ಯಕ್ತಿದ್ವದ್ದು, ಅದೇನು ಮಾತು ಅದೇನು ನಗು ಕೈಲ್ಲೇನು ಹವಾ ಬಾವ ಮುಗುವಿನೊಡನೆ ಏನು ಆತ ದೊಡ್ಡವರಲ್ಲಿ ಅದೇನು ಹಾಸ್ಯ ಮಿಶ್ರಿತ ಗಮೀರ್ಯ ತಲೆ ತಿರುಗಿಸುವ ರೀತಿ, ಆಶ್ಚರ್ಯ ಪ್ರಕಟಿಸುವ ರೀತಿ ನಾನು ಮೂಖನಾಗಿ ನಿಂತಿದ್ದೆ ನನ್ನ ಹಗೆ ನನ್ನ ಸ್ನೇಹಿತ ಕೃಷ್ಣ ಕೂಡ......... ಇಲ್ಲಿಯೂ ಅದೇ ಮದುರವಾದ ನೋವು, ಅತ್ಯಂತ ಅಮೂಲ್ಯವಾದದ್ದನ್ನು ಹಿಡಿದಿಡಲಾಗದ ನೋವು ....... ಹೀಗೆ ಈ ಸೌಂದರ್ಯದ ಎರಡು ಮುಖಗಳು ಇವತ್ತಿನವರೆಗೂ ಹಲವು ಸರಿ ಕಂಡಿವೆ, ವಿಭಿನ್ನವಾದರೂ ಒಂದೇ ಪ್ರತಿಕ್ರಿಯೆ ಹುಟ್ಟಿಸುವ ಈ ವಿಸ್ಮಯ ಪ್ರಕ್ರಿಯೆ ಬಗ್ಗೆ ಆಶ್ಚರ್ಯದಿಂದ ನೋಡುತ್ತಿದ್ದೇನೆ...... - ಪ್ರೇರಣೆ ಅಂಟೆನ್ ಚೆಕಾವ್