Tuesday, June 30, 2020

ನಾಸ್ತಿಕನ ಪಾಡು


ದೇವನ ಬಿಟ್ಟವನಿಗೆ
ಹಿಡಿಯಲು ಏನಿಲ್ಲ
ನನ್ನ ನಂಬಿಕೆ
ನನ್ನ ವಿಶ್ವಾಸ
ಈ ಎರಡೇ
ದಾರಿ ದೀಪ

ಬಂದವು ಹಲವು
ಕಷ್ಟ
ಒಳಗೆಲ್ಲ ಸಂಕಟ
ಆದರೆ
ನ ಹೇಳಲಾರೆ
ಓ ನನ್ನ ದೇವರೇ ಕಾಪಾಡು.

ಸುಳ್ಳು ಸುಳ್ಳು
ಹೇಳಿಯಾದರೂ ನಂಬುವೆ
ಇಲ್ಲದ ದೇವರಾ
ತೊಗಲಲಿ ಆ ನರಕ

ಆದರೆ ನಾ ಹ್ಯಾಂಗೆ
ನಂಬಲಿ  ಅವನ ?
ಸುತ್ತ ನೋಡಿದರೆ ಅಳು ಗೋಳು
ಬೆಚ್ಚಿ ಬಿದ್ದ ಪುಟ್ಟ ಮರಿಗಳು
ಸುಮ್ಮನೆ ಸತ್ತು ಹೋಗುವ ಮಂದಿ
ಹಲವು ಮನೆಗಳ ದೀಪ ನಂದಿ.

ಇವೆಲ್ಲಾ ಪಾಪ ಪುಣ್ಯಗಳ ಕಂತೆಯಾದರೆ
ಅದರ ಹಿಂದೆ ಕೈ ಚೆಲ್ಲಿ
ಅಡಗಿ ಕುಳಿತ
ಆ ದೇವರ
ನಾ ಹ್ಯಾಂಗೆ ನಂಬಲಿ


 

Sunday, June 28, 2020

ಸಂಜೆ

ಸಂಜೆಯ ಬಣ್ಣ
ಮುಗಿಲಲಿ ಹರಡಿತ್ತು

ನಲ್ವತ್ತರ ಗಾಡಿಯಲ್ಲಿ
ನಾ ಈ ಮುಸ್ಸಂಜೆ ಆಗಿದ್ದೆ

ಅತ್ತ ರಾತ್ರಿಯಲ್ಲ
ಇತ್ತ ಬೆಳ ಬೆಳಗಲ್ಲ

ಬೆಳಗಿನ ನೆನಪು
ರಾತ್ರಿಯ ಭಯ

ಈ ಎರಡರ ನಡುವೆ
ನಿಂತು ಆಚೀಚೆ ಕಣ್ಣಾಡಿಸಿದೆ

ಸಮಯ ತಾನು ತಾನಾಗಿ
ಉರುಳುತ್ತಿತ್ತು

ಆ ಸಂಜೆಯ ಕೆಲವು ಕ್ಷಣಗಳ
ಮನಸಲ್ಲಿ ತುಂಬುತ್ತಾ

ಭೂತ ಭವಿಶ್ಯಗಳ  ಜಗ್ಗಾಟ
ತೊರೆದು

ಒಂದು ಲೋಟ ಕಾಫಿ ಕುಡಿದು
ಕಾಲು ಚಾಚಿ ಟಿವಿ ನೋಡಿದೆ! 

Sunday, June 21, 2020

ಕಲಿ ಅಳುವುದ

ಸುಂಸುಮನೇ ಅಳು
ಬಂದ್ರೆ
ನಾನೇನ್ ಮಾಡ್ಲಿ ?

ಒಳಗೊಳಗೇ
ಅಳಲೋ ?
ಮುಖ ಮುಚ್ಚಿ ಅಳಲೋ ?
ಬಿಕ್ಕಿ ಬಿಕ್ಕಿ ಅಳಲೋ ?

ಅಳುವುದೊಂದು ಕಲೆ ,
ಅತ್ತು ಹಗುರವಾಗುವುದು
ಎಲ್ಲರಿಗೆ ಒಲದಿಲ್ಲ .

ಸುತ್ತಾ ನೋಡಿದರೆ ,
ಅಳುವ ಬೆನ್ನ ಮೇಲೆ ಹೊತ್ತು
ನೆಡೆವರೇ ಜಾಸ್ತಿ .
ಈಗಲ್ಲ ನಾಳೆ
ಇನ್ನೊಮ್ಮೆ
ಮಗದೊಮ್ಮೆ
ಅಳುವೇ ಅನ್ನುತ್ತಾ, 
ಅಳುವ
ಬಾಕಿ ಉಳಿಸಿಕೊಂಡು, 
ಹಳೆ ಅಳುವಿಗೆ
ಹೊಸ ಅಳು
ಸೇರಿಸುತ್ತ, 
ಮೊಗವೆಲ್ಲ ಸುಕ್ಕುಕಟ್ಟಿ
ಬೆನ್ನೆಲ್ಲ ಗೂನಾಗಿ 
ಅಳುವ ಕಟ್ಟಿಹಿಡಿದು
ಕಾಯುವರು
ನನಗ ಅಳಲಿ ಎಂದು.

ಬಲು ಸುಲಭ
ಕಲಿಯಲು
ಅಳುವುದ. 
ಮಗುವೊಂದ್ನು ನೋಡು,
ಮಕ್ಕಳ ಮದ್ಯೆ ಕರಗು ,
ಹೇಳಿ ಕೊಟ್ಟಾರು
ಅಳುವದ! 

Saturday, June 20, 2020

ನಿದ್ದೆ

ಕಾಲು ಚಾಚಿ
ಕೈ ಹರಡಿ
ಕಣ್ಣು ಮುಚ್ಚಿ
ನಾ ಮಲಗಿದೆ. 

ಗಾಳಿ ಬೀಸಿ,
ಕರ ಪರ, ಚರ ಮರ ಕೇಳುತ್ತಾ, 
ಹದವಾಗಿ
ನಿದ್ದೆಗೆ
ಜಾರುತಿದ್ದೆ,

ಹಾಳಾದ ಹಳೆಯ ನೆನಪುಗಳು,
ನೋವುಗಳು,
ರಾತ್ರಿಯ ಭಯಗಳು,
ನಿದ್ದೆಯಲಿ ಕರಗಲು ಬಿಡದೆ ,
ಕಾಡಿ ಕಾಡಿ,
ಮುಚ್ಚಿದ ಕಣ್ಣೊಳಗೆ
ಕಣ್ಣ ಪಾಪೆಗಳ
ಹೊರಳಾಡುತಿತ್ತು,

ಹೊರಳಿ ಹೊರಳಿ
ಮೇಲ್ಹೊದಿಕೆ ಮುರುಡಿತ್ತು.
ಒಮ್ಮೆ ಚಳಿ
ಒಮ್ಮೆ ಸೆಕೆ
ಈ ಮಗ್ಗುಲು
ಆ ಮಗ್ಗಲು
ಎಲ್ಲೆಡೆ
ಕಪ್ಪು ಕತ್ತಲೆ.

ನಾನಾಗ ಆದೆ
ಒಂದು ಹಂಸ
ಬಿಳಿಯಾಗಿ ಹಾರಿದೆ ನಿರಂತರ. 
ನೊನೊಬ್ಬ ರಾಜಕುಮಾರ
ಆ ವನದಲ್ಲಿ ಹುಡುಕಿದೆ ಅವಳ. 
ಕೆಲವೊಮ್ಮೆ ನಾನಾದೆ
ಹನುಮಂತ.
 ಹೌದು
ಭಯವಿಲ್ಲದ ಹನುಮಂತ.
ಕಡಲುಗಳು, ಕಂದರಗಳು
ಲೆಕ್ಕವಿಲ್ಲ ನನಗೆ. 
ಆಗೊಮ್ಮೆ ಈಗೊಮ್ಮೆ
ನಾನಾದೆ ಸೂರ್ಯ
ಉಜ್ವಲವಾಗಿ
ರಾತ್ರಿಯ ಕತ್ತಲೆಯ ಕರಗಿಸುತ್ತಾ.

ಹೀಗೆಲ್ಲಾ ಮನಃಪಟಲದ
ಮೇಲೆ ಸಿನೆಮಾ ನೋಡುತ್ತಾ
ನಾ
ನಿದ್ದೆ ಹೋದೆ! 

Tuesday, June 16, 2020

ಜಗಕೆಲ್ಲ ನಾ -ರು?



ನನಗೇನು ಅಹಂಕಾರ?
ಅಲ್ಲ
ನನಗೇಕೆ ಅಹಂಕಾರ?

ಕಾರ ಸಿಹಿ ಕಹಿ ಹುಳಿ
ಎಲ್ಲ ನಂಗೊತ್ತು
ಬದುಕೆಲ್ಲಾ ಅರಿದು ಕುಡಿದೆ
ಜಗವೆಲ್ಲ ನೋಡಿ ಬಿಟ್ಟೆ
ನನ್ನಾಚೆ ಏನಿಲ್ಲ

ನೀನ್ಯಾರೋ ಹುಲು ಮಾನವ
ನಾ ಹೇಳುವೆ ಎಲ್ಲಕ್ಕೂ ಉತ್ತರ
ಕರೋನವೊ 
ಕಾಶ್ಮೀರವೊ
ಕಾರ್ಮಿಕರೋ
ಪರಿಹಾರ  ನನ್ನ ನಾಲಿಗೆ ತುದಿಯಲ್ಲಿದೆ. 

ನೀ ತಾ ಕ್ಯಾಮೆರಾ'
ಒಂದು ಮೈಕು'
ಇರಲಿ ಯೂಟ್ಯೂಬ್
ಬರಲಿ ಜನ
ಹಾಕು ಪ್ರಕರ ದೀಪ.
ಸ್ಕ್ರೀನ್ ತುಂಬಲಿ ನನ್ನ ಮುಖ
ನನ್ನ ನಗು.
ಹೊಳೆಯಲಿ ನನ್ನ ಕಣ್ಣು
ಮಿಂಚಲಿ ಗಡ್ಡದ ಕೂದಲು. 

ಆಗ ನೋಡು ನನ್ನ ಚಮತ್ಕಾರ
ಎಲ್ಲ ಸಮಸ್ಯೆಗಳ
ಕಡಿದು ಕಡಿದು
ಹಾಕುವೆ. 
ಎಲ್ಲರಿಗು ಆಹಾ ಅನಿಸಿ,
ಜಗವ ಮರೆತು
ನನ್ನ ಮುಖಾರವಿಂದವ
ಎವೆಯಿಕ್ಕದೆ ನೋಡುತ
ಜಗಕೆಲ್ಲ ನನ್ನ ಮಂತ್ರ
ಹಂಚುವರು.

ಹಸಿದವರು ಅಳುವವರು
ಮರುಗುವರು, ಗೋಳಿನವರು
ಇವರು ನಿರಂತರ.
ಅಳುವುದು ಮಹಾಪಾಪ
ಶಾಂತಂ ಪಾಪಂ. 
ನನ್ನ ಮಾತು ಅಮೃತಾಂಜನ
ಕೆಲವು ಕ್ಷಣಗಳ  ಆರಾಮ !
ನಂತರ ಇದ್ದಿದ್ದೇ ,
ದಿನ ದಿನದ ಗೋಳು. 
ಮತ್ತೆ ಮತ್ತೆ ನೋಡು
ನನ್ನ ಯೂಟ್ಯೂಬ್
ಬದುಕಲು ಕೂಳು ಬೇಕಿಲ್ಲ
ನನ್ನ ಮಾತು ಸಾಕು!!!

ಅಣ್ಣ ತಮ್ಮ

ಇಲ್ಲಿ ನೋಡೋ ಅಣ್ಣ
ಏನು ನೋಡಲಿ ತಮ್ಮಾ

ಹಕ್ಕಿಯೋ ಗುಬ್ಬಿಯೊ ಕಾಕವೋ
ಗುಪ್ಪಳಿಸುವ ಅಳಿಲೋ
ಗೋಡೆ ಮೇಲಿನ ಓತಿಕ್ಯಾತವೋ

ಯಾವಾಗಲು ನಿನ್ನ ಹಠ
ನಾ ಕಂಡಿದ್ದೆಲ್ಲ ನಿಂಗೆ ಬೇಕು
ಪುಟ್ಟ ಮಾಣಿಗೆ
ಜಾಸ್ತಿ ಪ್ರೀತಿ

ನಾ ಈಕಡೆ ನೋಡ್ತಿ
ನನ್ನ ಕಡೆನೇ ಎಲ್ಲ ಚಂದ
ನಾ  ನೋಡಿದ ಗುಬ್ಬಿ ಕೆಂಪು
ನಾ ನೋಡಿದ ಚಂದ್ರ ತಂಪು

ಒಮ್ಮೊಮ್ಮೆ ಸಿಟ್ಟು
ನೋಡಿ ನಿನ್ನ ಹಠದ ಪಟ್ಟು
ಆದರೆ
ಬೇಕಲ್ಲ ಜೊತೆಗಾರ
ಅಳಲು ಹಾಡಲು ಕುಣಿಯಲು
ನನ್ನ ತಂಟೆಗೆ ಹುಚ್ಚೆದ್ದು ನಗಲು
ರಾತ್ರಿ ಗುಸುಸು ಗುಟ್ಟು ಗುನುಗಲು
ಅಪ್ಪ ಅಮ್ಮಂಗೆ ಸಾಕ್ಷಿ ಹೇಳಲು 

Saturday, June 06, 2020

ನೋವು

ಸೊಸ-ಹುಟ್ಟಿನಲಿ ಉಳಿದವು ನೋವಿನ ಗಂಟು
ನಗುವೆಲ್ಲ ನಲಿವೆಲ್ಲ ಸೋಸಿ ಹೊಂತು

ನೋವಿನ ಗಂಟು ಕರಗದು
ಬಿಸಿ ಮಾಡಿ ನೋಡಿದೆ
ತಣಿಸಿ ನೋಡಿದೆ
ಆಳದಲ್ಲಿ ಹುಗಿದಿಟ್ಟೆ
ಮನದಲಿ ಬೇರೆ ಮನೆ ಮಾಡಿ
ಕೀಲಿ ಹಾಕಿ ಕೂಡಿಟ್ಟೆ

ಯಾವುದೊ ಕ್ಷಣದ್ಲಲಿ
ತಳದಿಂದ್ದೆದ್ದು
ಬಿರುಗಾಳಿಯಾಗಿ
ತನು ಮನವನ್ನೆಲ್ಲ ಹಿಂಡಿ
ನೋವಾಗಾಳಿ
ಹುಚ್ಚೆದ್ದು ಬೀಸಿತ್ತು

ಹುಲು ಮಾನವಾ
ತುಟಿ ಕಚ್ಚಿ
ಕಣ್ಣ ಮುಚ್ಚಿ
ಆ ಕೆಂಡದ ಮೇಲೆ ನಡಿ
ಪರ್ಯಾಯವಿಲ್ಲ ನಿನಗೆ

ದೂರದ ಕೆರೆ
ಮಗುವೊಂದರ ನಗು
ಅರಳಿದ ಹೂ
ಬೀಸಿದ ತಂಗಾಳಿ
ಸ್ವಂತನದ ನುಡಿ
ಕೈ ಹಿಡಿದು ನೆಡೆಸೀತು
ಕುಗ್ಗದಿರು ಇಂದು

Thursday, June 04, 2020

ಬೇಂದ್ರೆ

ನಾ ಆಗ ಹೊರಟೆ ಬೇಂದ್ರೆ
ಆದರೆ ಒಂದು ತೊಂದ್ರೆ

ನಾ ಎಲ್ಲಿ  ಅವರೆಲ್ಲಿ
ನಾ ಇಲ್ಲಿ ಅವರು ಸಿಂಹಾದ್ರಿಯಲಿ

ಆದರೂ ಆಸೆ
ಆ ಪದ್ಯ
ಈ ಪದ್ಯ
ಓದಿ
ನಾ ಬರೆಯಲು ಕುಂತೆ
ಬರೆದೆ
ಕಂತೆ ಕಂತೆ
ಆದರೆ ಬೇಂದ್ರೆ ರುಚಿ ಬಂತೇ ? 

Wednesday, June 03, 2020

ನಿದ್ದೆ

ಬ್ಯಾಣದಲ್ಲಿ ಬಂತು ನಿದ್ದೆ
ಹಾಸಿಗೆಯಲ್ಲಿ ಬಾರದು

ಬೀಸಿದ ಗಾಳಿ
ಚುಚ್ಚಿದಾ ಹುಲ್ಲು
ಹಕ್ಕಿಯಾ ಕೂಗು
ಆಗಾಗ ಅಲ್ಲಿಲ್ಲಿ ತುರಿಕೆ

ಬ್ಯಾಣದ ಕನಸೇ ಬೇರೆ
ಬಣ್ಣ ಕರಡಿ
ನೆನಪು ಹರಡಿ
ತೆಳು ಹದದ ಕನಸು

ಕನಸ ಸಿಹಿ ಹೆಚ್ಚಾಗಿ
ನೀರು ಬೇಕೆನಿಸಿ
ಕಣ್ಣ ಬಿಟ್ಟಾಗ
ಕಂಡದ್ದು
ಮರದ ತುದಿ
ಅದರಾಚೆ ಹರಡಿದ ನೀಲಿ

ಮೈ ಮುರಿದು ಎದ್ದೆ
ಸುತ್ತಲೂ ನೋಡಿ ಒಮ್ಮೆ ಬೆಚ್ಚಿಬಿದ್ದೆ
ನಾ ಎಲ್ಲಿದ್ದೆ ಎಂಬ ಅರಿವು ಆಗಿ
ನಗುವಾಗಿ ಮೂಕದೆಲ್ಲೆಲಾ ನಿಂತಿತ್ತು. 

Cyclone

Clone
Of
Corona, A cyclone.
Maybe
One day Corona.
Wednesday special.
All are safe,
feel like go out
and explore
the unsafe world.
Tired of being safe.
Life is short.
Chalo let’s walk
into the wind
look into the storm’s eye.
And say

I am brave.